Tuesday, 21 January 2020

ಹತ್ತಿ ಬಿತ್ತಿ

        ನಮ್ಮೂರು ಉತ್ತರ ಕರ್ನಾಟಕದ ಒಂದು ಹಳ್ಳಿ ರಿ, ನಮ್ಮದು ಹೊಲ ಅದ, ಹೊಲ ಅದ ಅಂಥ ಹೇಳಿ ಸುಮ್ಮನ ಕೂತಕಾಲಕ ಆಕೆತ ಏನ್ರಿ,  ಅದ್ರಾಗ ಭಿತ್ತಿ ಬೆಳಿಬೇಕರಿ ಅಂದ್ರ ನಮಗ ಎರಡು ಹೊತ್ತು ಊಟಕ ಆಕೇತ್ರಿ. ಅಂದಂಗ ನಮ್ಮ ಕಡೆ ನೀರಾವರಿ ಬಹಳ ಕಡಿಮಿರಿ ನಾವು ಏನ್ ಮಾಡಿದ್ರು ಮುಗಿಲ ನೋಡಿ ಜೇವನ ಮಾಡಬೇಕರಿ. ಏರಿ ಹೊಲ ಇದ್ದರ ವರ್ಷಕ್ ಎರಡು ಪೀಕು ಬರತವರಿ ಮಸಾರಿ ಇದ್ರ ವರ್ಷಕ್ ಒಂದ್ ಪೀಕು ನೋಡ್ರಿ, ನಮ್ಮಪ್ಪ ಅಜ್ಜ ಹಾಕಿದ್ದು ಆಲ ಮರ ಅಂಥ ಹೇಳಿ ವರ್ಷಾ ಏರಿ ಹೊಲಕ್ ಬೆಳ್ಳುಳ್ಳಿ ಮತ್ತ ಒಳ್ಳಾಗಡ್ಡಿ ಬಿಟ್ಟು ಏನು ಹಾಕಲ್ಲರಿ, ರೇಟ್ ಅಂತೂ ಕೇಳಬ್ಯಾಡ್ರಿ ಜೂಜು ಆಡಿದ್ರ ಹತ್ತು ಸಲಕ ಒಂದು ಸರತಿ ನರ ಗೆಲ್ಲತಿವಿ ಅನ್ನೊ ನಂಬಿಕಿನರ ಇರತತಿ, ಉಳ್ಳಾಗಡ್ಡಿ ರೇಟ್ ಅಂತೂ ಜೂಜು ಅಟಕಿನೂ ಕಡಿ ಆಗೆತೇರಿ ಸಿಕ್ಕರ ಶಿವ ಇಲ್ಲಂದ್ರ ಏನೂ ಇಲ್ಲ.
ನಮ್ಮಪ್ಪಗರ ರೇಟ್ ನೋಡಿ ತೆಲಿ ಕೆಟ್ಟು ಹೋಗಿತ್ತರಿ ಏನಾರ ಮಾಡಬೇಕು ಅಂಥ ಚಿಕ್ಕಯ್ಯನ ಕಟ್ಟಿ ಬೇವಿನಮರದ ನೆಳ್ಳಿಗೆ ಅಡ್ಡ ಆಗಿ ಗುರೆಳ್ಳು ಪುಡಿ ಅಂತ ತೆಲಿ ಕೂದಲನ ಕೆರಕಳ್ಳಕಾತಿದ್ರಿ, ಅಷ್ಟರಾಗ ಊರಾಗ ಏನೋ ಮೈಕಿನ್ ಶಬ್ದ ಕೇಳಿಸ್ತೀರಿ ಎದ್ದು ನೋಡಿದಿರಾ ಕಾರ್ ಗಾಡಿ, ಅದ್ಕ ಮೈಕ್ ಕಟ್ಟಗೊಂಡು ಬಿ ಟಿ ಹತ್ತಿ ಅದ್ವೆರ್ಟಿಸ್ ಮಾಡಾಕತ್ತಿದ್ರು, ನಮ್ಮಪ್ಪಗರ ಮನಸ್ಸು ತಡೀಲಿಲ್ಲರಿ ಎದ್ದು ಬಡಬಡ ಕಾರ್ ಗಾಡಿ ಹತ್ತರ ಹೋದಂವನ ಎಲ್ಲ ಕೇಳಿ ಮತ್ತ ಒಂದ್ ಪಾಕೆಟ್ ಹತ್ತಿ ಬೀಜನ ತಗೊಂಡ್ರಿ .ನಮ್ಮಪ್ಪ ಗಂತೂ ಏನೋ ಹೊಸ ಹುಮ್ಮಸ್ಸು ಮರು ದಿವಸನ ಹೊಲ ಹಸನ್ ಮಾಡಿ ಹತ್ತಿ ಬಿತ್ತೆ ಬಿಟ್ಟರಿ, ಬಹಳ ಚಂದ ಜೋಪಾನ ಮಾಡಿದ್ರು, ಚೆಂದ ಅಂದ್ರ ಹೆಂಗ ಅಂದ್ರಿ ಮನಿ ಮಂದಿಕಿನು ಹೆಚ್ಚ ಕಾಳಜಿ ಮಾಡಿದ್ರ, ಗೊಬ್ಬರ ಹಾಕೋದು, ಔಷಧಿ ಹೊಡೆಯದು ಎಲ್ಲ ಮಾಡಿದ್ರು ಇನ್ನೇನು ಹತ್ತಿ ಕಾಯಿ ಹಿಡಿಬೇಕು ಅನ್ನದ್ರೊಳಗ ಮಳಿರಾಯ ನಮ್ಮ ಮ್ಯಾಲ ಸಿಟ್ಟು ಆದಂಗ ಕಾಣಿಸ್ತರಿ, ನಮ್ಮಪ್ಪರ ದಿವಸ ಮಾಡ ನೋಡವರಿ, ನಮ್ಮ ಅಪ್ಪ ಮಾಡ ನೋಡದ ಬಿಡಲಿಲರಿ ಮಳಿ ಅಂತೂ ಬರ್ಲೆ ಇಲ್ಲರಿ, ಇದ್ದದ ಹಸಿಗೆ ಹತ್ತಿ ಗಿಡ ಒಂದಿಷ್ಟು ಕಾಯಿ ಹಿಡದ್ದವು, ರಣರಣ ಬಿಸಿಲು ಹೊಡ್ಯಾಕತ್ತರಿ, ಬಿಸಿಲಿಗೆ ಹತ್ತಿ ಒಡೆಕತ್ತರಿ, ಒಡ್ದಿದ ಬಿಳಿ ಹತ್ತಿ ನೋಡಬೇಕಂತನೂ ಅಥವಾ ನಮ್ಮ ಅಪ್ಪ ಮಾಡ ನೋಡಿದಕನಾ ಮಳಿರಾಯ ಬಂದ ಬಿಟ್ಟರಿ, ಏನ್ ಕೇಳತಿರಿ ಬಿಳಿ ಬಣ್ಣದ ಹತ್ತಿ ಮಳಿಗೆ ಗೊತ್ತ ಸಿಗದಂಗ ಆತು, ಹತ್ತಿ ಬಿಡಸಾಕ ಆಳು ನೋಡಿದ್ರ ಸಿಗವಲ್ಲವು ಹಂಗು ಹಿಂಗು ಕಷ್ಟ ಪಟ್ಟು ನಮ್ಮಪ್ಪ ಆಳು ಕರಕಂಡ ಬಂದ್ರು ಹತ್ತಿ ಬಿಡಿಸಿ ಮಾರ್ಕೆಟ್ಗೂ ಒಯ್ದರು, ಮನಿಗೆ ಬಂದು ಆಳಿಗೆ ರೊಕ್ಕ ಕೊಟ್ಟರ ಹತ್ತಿ ಮಾರಿದ್ ಅರ್ಧ್ ರೊಕ್ಕ ಆಳಿಗೆ ಹೋತು ಇನ್ನ ಅರ್ಧ್ ಹೊಲದ್ ಖರ್ಚಿಗೆ ನೀಟ್ ಆತು, ಇದೆಲ್ಲ ನೋಡಿ ನಮ್ಮಪ್ಪಗ ತೆಲಿ ತಿರಿಗಿದಿಂಗ ಆತು. ಮತ್ತ ನಮ್ಮಪ್ಪ ಚಿಕ್ಕಯ್ಯನ ಕಟ್ಟಿ ಬೇವಿನಮರದ ನೆಳ್ಳಿಗೆ ಅಡ್ಡ ಆಗಿ ಗುರೆಳ್ಳು ಪುಡಿ ಅಂತ ತೆಲಿ ಕೂದಲನ ಕೆರಕಳ್ಳಕಾತಿದ್ರಿ.
ಹಿಂಗ ಅದ ನೊಡ್ರಿಪ ಈಗಿನ ಬೇಸಾಯ, “ಉಣ್ಣಾಕ ಆದ್ರ ತೋಡಕ ಆಗಲ್ಲ, ತೋಡಕ ಆದ್ರ ಉಣ್ಣಾಕ ಆಗಲ್ಲ”.

ಇಂತಿ ನಿಮ್ಮ

ಶಂಭು

1 comment:

  1. ಅಣ್ಣ ಸಮಗ್ರ ಕೃಷಿ ಮಾಡಿಸಿ ಒಂದು ಬೆಳೆ ಹೋದ್ರು ಇನ್ನೊಂದು ಕೈ ಹಿಡಿಯುತ್ತೆ ಉದಾಹರಣೆಗೆ ತೋಟಗಾರಿಕೆ ಬೆಳೆಗಳ ನಡುವೆ ಈ ಮೂರು ತಿಂಗಳ ಅಥವಾ ನಾಲ್ಕೂ ತಿಂಗಳ ಬೆಳೆಗಳನ್ನೂ ಬೆಳೆಯಹುದಾಗಿದೆ.

    ReplyDelete